ಕ್ಯಾನ್ಸಸ್ ನಗರ 2

ಅಮೆರಿಕ ಸಂಯುಕ್ತಸಂಸ್ಥಾನದ ಮಿಸೂóರಿ ರಾಜ್ಯದ ಪಶ್ಚಿಮದ ನಗರ, ಮಿಸೂóರಿ ನದಿಯ ಮೇಲಿದೆ. ಈ ನಗರಕ್ಕೆ ಸೇರಿದಂತೆ ಸ್ಥಾಪಿತವಾಗಿರುವ ಇತರ ನಗರಗಳು ರಾಜ್ಯದ ಗಡಿಯಿಂದ ಮಾತ್ರ ಪ್ರತ್ಯೇಕವಾದಂತಿರುವ ಕ್ಯಾನ್ಸಸ್ ರಾಜ್ಯದ ಕ್ಯಾನ್ಸಸ್ ನಗರ, ಮಿಸೂóರಿ ರಾಜ್ಯದ ಇಂಡಿಪೆಂಡೆನ್ಸ್ ನಗರ ಮತ್ತು ಅದೇ ರಾಜ್ಯದ ಉತ್ತರ ಕ್ಯಾನ್ಸಸ್ ನಗರ. ಈ ನಗರದ ಜನಸಂಖ್ಯೆ 4,75,539 (1960).

ಸುಂದರವಾದ ಉದ್ಯಾನಗಳು, ರಸ್ತೆಗಳು ಮತ್ತು ಬೆಟ್ಟದ ಮಾರ್ಗಗಳು ಈ ನಗರದ ವೈಶಿಷ್ಟ್ಯ. ಕ್ಯಾನ್ಸಸ್ ನದಿಯ ಪಶ್ಚಿಮಕ್ಕಿರುವ ಸಮತಲ ಪ್ರದೇಶದಲ್ಲಿ ರೈಲ್ವೆ ಅಂಗಳಗಳು, ಪಶುಶಾಲೆ, ಒಟ್ಟು ವ್ಯಾಪಾರದ ಮಳಿಗೆಗಳು ಮತ್ತು ಉದ್ಯಮ ಸಂಸ್ಥೆಗಳಿವೆ. ನಗರದ ಉತ್ತರ ಮತ್ತು ಪೂರ್ವಭಾಗಗಳಲ್ಲಿರುವ ಮಿಸೂóರಿ ನದೀಕಣಿವೆ ಪ್ರದೇಶದಲ್ಲಿ ಧಾನ್ಯದ ಮಳಿಗೆಗಳು ಮತ್ತು ಕಾರ್ಖಾನೆಗಳುಂಟು.

ಈ ನಗರವಿರುವ ಪ್ರದೇಶದಲ್ಲಿ 1821ರಲ್ಲಿ ಪ್ರಪ್ರಥಮ ನೆಲಸಿಗರು ನಿವಾಸಗಳನ್ನು ನಿರ್ಮಿಸಿಕೊಂಡರು. ಎರಡನೆಯ ವಲಸೆ 1831ರಲ್ಲಿ ಬಂತು. ಹೀಗೆ ಸ್ಥಾಪಿತವಾದ ನೆಲೆ 1834ರಲ್ಲಿ ವೆಸ್ಟ್‍ಪೋರ್ಟ್ ನಗರವಾಗಿ ರೂಪುಗೊಂಡು ನ್ಯೂ ಮೆಕ್ಸಿಕೋದ ಸಾಂತ ಫೇ ನಗರದೊಂದಿಗಿನ ವ್ಯಾಪಾರದಲ್ಲಿ ಇಂಡಿಪೆಂಡೆನ್ಸ್ ನಗರದೊಂದಿಗೆ ಸ್ಪರ್ಧಿಸುತ್ತಿತ್ತು. 1838ರಲ್ಲಿ ವೆಸ್ಟ್‍ಪೋರ್ಟ್ ನಗರದ ಕ್ರಮಬದ್ಧ ರಚನೆಗಾಗಿ ನಿವೇಶನಗಳ ಸರ್ವೇಕ್ಷಣೆ ನಡೆಯಿತು.
1850ಕ್ಕೆ ಹಿಂದೆ ಈ ನಗರ ವಾಸ್ತವವಾಗಿ ಸಾಂತ ಫೇ ಗೂ ಪಶ್ಚಿಮನಗರಗಳಿಗೂ ನಡುವಣ ವ್ಯಾಪಾರಮಾರ್ಗದ ಕೊನೆಯ ಸ್ಥಳವಾಗಿತ್ತು. ಸಾಂತ ಫೇ ನಗರಕ್ಕೆ ಇಲ್ಲಿಂದ ಹ್ವಿಸ್ಕಿ, ಜಿನಸಿ ಮುಂತಾದ ಸರಕುಗಳು ಸಾಗುತ್ತಿದ್ದುವು. ಅಲ್ಲಿಂದ ಉಣ್ಣೆ, ಚರ್ಮದ ತೊಡಿಗೆಗಳು, ಒಣಮಾಂಸ, ಮೆಕ್ಸಿಕನ್ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು ಮತ್ತು ಬೆಳ್ಳಿ ಮತ್ತು ಚಿನ್ನಗಳ ಪುಡಿ ಬರುತ್ತಿದ್ದುವು. ಅಂತರ್ಯುದ್ಧದ ಕಾಲದಲ್ಲಿ ಇಂಡಿಪೆಂಡೆನ್ಸ್ ಮತ್ತು ವೆಸ್ಟ್‍ಫೋರ್ಟ್ ನಗರಗಳು ಸಮರಕ್ಷೇತ್ರಗಳಾಗಿದ್ದವು. ಆಗ ಕ್ಯಾನ್ಸಸ್ ನಗರದ ವ್ಯಾಪಾರ ಯಾವ ತಡೆಯೂ ಇಲ್ಲದೆ ನಡೆಯುತ್ತಿತ್ತು. ಯುದ್ಧದ ತರುವಾಯ ರೈಲು ರಸ್ತೆಗಳು ನಿರ್ಮಾಣವಾಗುವ ವರೆಗೆ ನಗರದ ವ್ಯಾಪಾರ ಕುಂಠಿತವಾಗಿತ್ತು. 1865ರಲ್ಲಿ ಪ್ರಥಮ ರೈಲು ರಸ್ತೆ ಸೇಂಟ್ ಲೂಯಿ ನಗರದಿಂದ ಈ ನಗರವನ್ನು ಮುಟ್ಟಿತು. ಇದರಿಂದ ನಗರದ ವಾಣಿಜ್ಯ ಕುದುರಿತು.
ಇದು ಕೈಗಾರಿಕೆಗಳ ಮತ್ತು ವಿವಿಧ ಉದ್ಯಮಗಳ ಕೇಂದ್ರ. ನೆರೆಯ ಕ್ಯಾನ್ಸಸ್ ರಾಜ್ಯದಲ್ಲಿರುವ ಕ್ಯಾನ್ಸಸ್ ನಗರದ ವಾಣಿಜ್ಯದೊಂದಿಗೆ ಈ ನಗರದ ವಾಣಿಜ್ಯ ಸಂಬಂಧ ಬೆಳೆದಿದೆ. ಇದು ಗೋಧಿ ವ್ಯಾಪಾರಸ್ಥಳ. ಮೋಟಾರು ವಾಹನಗಳ ಜೋಡಣೆ ಹಾಗೂ ರೈಲುಗಾಡಿಗಳ ನಿರ್ಮಾಣ ಇಲ್ಲಿಯ ಕಾರ್ಖಾನೆಗಳಲ್ಲಿ ನಡೆಯುತ್ತವೆ. ದನಗಳ ಮಾರಾಟಕ್ಕೆ ಈ ನಗರ ಪ್ರಸಿದ್ಧ. ಹೆಂಗಸರ ಉಡುಪುಗಳು ತಯಾರಾಗುತ್ತವೆ. ಜಾನುವಾರುಗಳ ಸಾಗಣೆಗೆ ಇದೊಂದು ಮುಖ್ಯ ರೈಲ್ವೆಜಂಕ್ಷನ್.

ಇಲ್ಲಿ 1955ರಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣವಾಯಿತು. ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಮುಖ ನಿಲ್ದಾಣಗಳಲ್ಲಿ ಒಂದು. ಮೂರು ರೈಲು ಸೇತುವೆಗಳನ್ನೂ ಆರು ರಸ್ತೆ ಸೇತುವೆಗಳನ್ನೂ ಈ ನಗರದ ಸಮೀಪದ ಮಿಸೂóರಿ ನದಿಗೆ ಅಡ್ಡಲಾಗಿ ಹಾಕಲಾಗಿದೆ. ಕಾ ಕಣಿವೆಯಲ್ಲಿ ರೈಲು ಸಂಚಾರಕ್ಕೆ ಕಮಾನು ಸೇತುವೆಯುಂಟು.
ಈ ನಗರ ಅಮೆರಿಕ ಸಂಯುಕ್ತಸಂಸ್ಥಾನದ ನಟ್ಟನಡುವೆ ಇರುವುದರಿಂದ ಇದು ರಾಷ್ಟ್ರೀಯ ಸಮ್ಮೇಳನಗಳಿಗೆ ಮುಖ್ಯ ಸ್ಥಳ. ಪ್ರತಿವರ್ಷವೂ ಇಲ್ಲಿ ನಡೆಯುವ ಜಾನುವಾರು ಪ್ರದರ್ಶನ ಅಮೆರಿಕದ ಅತ್ಯಂತ ದೊಡ್ಡ ಪ್ರದರ್ಶನಗಳಲ್ಲಿ ಒಂದು. ಇಲ್ಲಿಯ ಪಶು ವಿನಿಮಯ ಕಟ್ಟಡ ಪ್ರಖ್ಯಾತವಾದ್ದು.

ಕ್ಯಾನ್ಸಸ್‍ನಗರದ ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ 1915ರಲ್ಲಿ ಸ್ಥಾಪಿತವಾದ ಜೂನಿಯರ್ ಕಾಲೇಜೂ ಸೇರಿದೆ. ಖಾಸಗಿ ಸಂಸ್ಥೆಯಾದ ಕ್ಯಾನ್ಸಸ್ ಸಿಟಿ ವಿಶ್ವವಿದ್ಯಾಲಯ 1933ರಲ್ಲಿ ಸ್ಥಾಪಿತವಾಯಿತು. ಅದಕ್ಕೆ ಸೇರಿದ ಹಾಗೆ ಅನೇಕ ಕಾಲೇಜುಗಳಿವೆ. ವಸ್ತುಸಂಗ್ರಹಾಲಯವಿರುವುದು ನಗರದ ಉತ್ತರ ಭಾಗದಲ್ಲಿ. ಇಲ್ಲಿಯ ಸಾರ್ವಜನಿಕ ಗ್ರಂಥಾಲಯಕ್ಕೆ ಅನೇಕ ಶಾಖೆಗಳುಂಟು. 1880ರಲ್ಲಿ ಸ್ಥಾಪಿತವಾದ ಕ್ಯಾನ್ಸಸ್ ಸಿಟಿ ಸ್ಟಾರ್ ಇಲ್ಲಿಯ ಪ್ರಮುಖ ದಿನಪತ್ರಿಕೆ. ಅದರ ನೌಕರರೇ ಆ ಪತ್ರಿಕೆಯ ಒಡೆಯರು. ಕ್ಯಾನ್ಸಸ್ ನಗರ ಪ್ರದೇಶದಲ್ಲಿ 50 ಉದ್ಯಾನಗಳಿವೆ. ಅವುಗಳ ಒಟ್ಟು ವಿಸ್ತೀರ್ಣ 3,000 ಎಕರೆ. ಕಾರ್ಲ್‍ಮಿಲ್ಲಿಸ್ ನಿರ್ಮಿಸಿದ ವೋಲ್ಕರ್ ಸ್ಮಾರಕ ಕಾರಂಜಿ ಇರುವುದು ನಗರದ ದಕ್ಷಿಣದಲ್ಲಿ. ಲಿಬರ್ಟಿ ಮೆಮೋರಿಯಲ್ ಇಲ್ಲಿಯ ಪ್ರಸಿದ್ಧ ಕಟ್ಟಡಗಳಲ್ಲೊಂದು. 	(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ